ಆಡಿ ಬಾ ನನ ಕಂದ

 


ಚೀನಾದಿಂದ ಈ ಕೊರೊನಾ ವೈರಸ್ ವ್ಯಾಪಕವಾಗಿ ಪ್ರಪಂಚದಾದ್ಯಂತ ಹರಡಿಕೊಂಡಿದೆ. ಭಾರತದಲ್ಲಿ ಇದರ ಹಾವಳಿಯು ರಕ್ತಬೀಜಾಸುರನಂತೆ ಹಬ್ಬುತ್ತಿದೆ. ವಿಶ್ವದಾದ್ಯಂತ ಇದಕ್ಕೆ ಲಸಿಕೆ, ಔಷಧಿಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಲೇ ಇದೆ. ಪ್ರಥಮವಾಗಿ ಭಾರತದಲ್ಲಿ ಮಾರ್ಚ್ 21ರ ಭಾನುವಾರ ಒಂದು ದಿನದ ಲಾಕ್ ಡೌನ್ ಅನ್ನು ಪ್ರಾರಂಭಿಕ, ಪ್ರಯೋಗಾತ್ಮಕವಾಗಿ ಮಾಡಲಾಯಿತು. ನಂತರ ಅದು 24 ರಿಂದ 21 ದಿವಸ ಹಾಗೆ ಮುಂದುವರಿಯುತ್ತಾ ಹೋಯಿತು.ಇದೆಲ್ಲಾ ಯಾಕೆ ? ಹೇಳಿದ್ದನ್ನೇ,ಕೇಳಿದ್ದನ್ನೇ ನ್ಯೂಸ್ ಚಾನಲ್ ಗಳ ರೀತಿ ಹೇಳ್ತಿದೀರಾ ಅಂತ ಅಂದುಕೊಳ್ತಿದೀರಾ? ಆ.... ಇರಿ ಸ್ವಲ್ಪ ಮುಂದೆ ಹೇಳುವುದನ್ನು ಕೇಳಿ. ಹಿರಿಯರಾದ ನಮಗೆ ಇದು ಕೇಳಿ ಬೇಸರವಾದರೆ ಮಕ್ಕಳು ಇದನ್ನು ಹೇಗೆ ಎದುರಿಸ ಬೇಕು ಹೇಳಿ?ಮತ್ತೇನಿದು ಪುರಾಣ ಎಂದುಕೊಳ್ಳದಿರಿ.ಈಗ ನಾನು ಹೇಳಬಯಸುವ ವಿಷಯಕ್ಕೆ ಬಂದೆ! ಈ ರಾದ್ದಾಂತಗಳಲ್ಲಿ ನನ್ನ ಪುಟ್ಟ ,ಐದು ತುಂಬಿದ LKG ಪಾಸಾಗಲು , ಪರೀಕ್ಷೆಗಾಗಿ ಕಾಯುತ್ತಿದ್ದ ಮೊಮ್ಮಗಳ ನೆನಪಾಯಿತು. ಏನು ಮಾಡುತ್ತಿರುವುದು ಈ ಸಮಯದಲ್ಲಿ ಎಂಬ ಚಿಂತೆ ನನಗಾಗಿತ್ತು. ಬೇಸಿಗೆಯ ಅಜ್ಜಿ ಮನೆಯೆಂದು ನಮ್ಮ ಮನೆಗೆ ಬರುವಂತಿಲ್ಲ. ಅವರು ಇನ್ನೂಂದು ಅಜ್ಜಿ ಮನೆ ಮೈಸೂರಿಗೆ ಹೋಗುವಂತಿಲ್ಲ. ? ಫ್ಲಾಟ್ ನ ನಿಯಮದಂತೆ ಹೊರಹೋಗುವಂತಿಲ್ಲ.ಏನು ಮಾಡಬೇಕು ಆ ಮಕ್ಕಳು. ತಾಯಿ ತಂದೆಗೆ work from home ಎಂಬ ಸಂಕೋಲೆ. ಏನೂ ಅರಿಯದ ಮಕ್ಕಳು ಕಾಲವನ್ನು ಹೇಗೆ ಉಳಿಯಬೇಕು. ಹೊರಗೆ ಹೋಗುವಂತಿಲ್ಲ. ಮಕ್ಕಳ ಜೊತೆಗೆ ಆಡುವಂತಿಲ್ಲ .ಮನೆಯಲ್ಲಿ ಕುಳಿತಿರುವ ಜಾಯಮಾನದವರಲ್ಲ. ಎಲ್ಲಾ ಮನೆಯವರು ಸೇರಿ ಒಂದು ಮೀಟಿಂಗ್ ಮಾಡಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಿ, ಇಂತಿಷ್ಟು ಸಮಯ ನಿಗದಿ ಮಾಡಿ ವಾಚ್ ಮೆನ್ ಹಾಗೂ ಅವನ ಹೆಂಡತಿಗೆ ಅಗತ್ಯ ತಿಳುವಳಿಕೆಯನ್ನು ನೀಡಿ ಮಕ್ಕಳಿಗೆ ಆಟದ ವ್ಯವಸ್ಥೆ ಮಾಡಿದರು.ಆಗಾಗ ಮಕ್ಕಳ ಮಾತೆಯರಿಗೆ ಅವರನ್ನೆಲ್ಲಾ ಗಮನಿಸುವ ಕೆಲಸ. ನಾ ಹೇಳುತ್ತಿರುವುದೆಲ್ಲಾ ಪಟ್ಟಣ ಬಿಟ್ಟು ಹಳ್ಳಿಯ ಕತೆಯಲ್ಲ.ಬೆಂಗಳೂರಿನ ಹೊರವಲಯ ಅಷ್ಟೇ. ಫ್ಲಾಟ್ ಪಕ್ಕದಲ್ಲಿ ಖಾಲಿ ಸೈಟ್ ಇತ್ತು. ನಾಲ್ಕು,ಐದು ಹೊಂಗೆಯ ಮರ ಚಿಗುರಿ ನಿಂತಿತ್ತು.ಮಕ್ಕಳನ್ನು ಆದರಿಸಿ ಕರೆಯುವಂತಿತ್ತು. ಸುತ್ತಲಿದ್ದ ಕಾಂಗ್ರೆಸ್ ,ಮತ್ತಿತರ ಗಿಡಗಂಟಿಗಳನ್ನು‌ ಕತ್ತರಿಸಿ ಆಡಲು ಬಯಲು ಸಿದ್ಧಮಾಡಿದರು. ಒಂದು ಮರಕ್ಕೆ ಹಗ್ಗದಿಂದ ಜೋಕಾಲಿ ಕಟ್ಟಿದರು. ಒಂದು ಮಗು ಆಡುತ್ತಿದ್ದಾರೆ ಇನ್ನೊಂದು ಕುಳಿತು ಕೊಳ್ಳಲು ಮರದ ಕೊಂಬೆಗಳ ಬಳಸಿ ಅಟ್ಟಣಿಗೆ ಸಿದ್ಧವಾಯಿತು. ಮಕ್ಕಳಿಗೆ ಖುಷಿಯೋ ಖುಷಿ. ಮೊದಲು ಹೆದರುತ್ತಿದ್ದವರು ನಂತರ ನಿಧಾನವಾಗಿ ಪಂಟರಾಗ ತೊಡಗಿದರು. ನಂತರ ಗೋಲಿ, ಲಗೋರಿ, ಕುಂಟೆ ಬಿಲ್ಲೆ ಒಂದೊಂದಾಗಿ ಆಟಗಳ ಆಗಮನವಾಯಿತು. ಮಧ್ಯಾಹ್ನ ಮನೆಗೆ ಹಿಂತಿರುಗಿ ಕೈ, ಕಾಲುಗಳನ್ನು ಸ್ಯಾನಿಟೈಸರ್ ನಿಂದ ಚೆನ್ನಾಗಿ ತೊಳೆದುಕೊಂಡು ಹಸಿದ ಹೊಟ್ಟೆಗೆ ಅಮ್ಮ ನ ಕೈಯ ಮೃಷ್ಟಾನ್ನ ಭೋಜನ. ನಂತರ ಅಮ್ಮನೊಂದಿಗೆ ಕೂಸುಮರಿ ಆಟ. ಅಷ್ಟರಲ್ಲಿ ಕಣ್ಣು ಎಳೆದುಕೊಂಡು ಹೊಗುತ್ತಿರಲು ಹಾಸಿಗೆ ಕಂಡುಕೊಂಡಂತೆ ನಿದ್ದೆಗೆ ಜಾರುವುದು . ಸಂಜೆ ಎದ್ದೊಡನೆ ಅಮ್ಮ ಮಾಡಿದ snacks ತಿಂದು ಅಪ್ಪನ ಜೊತೆಗೆ ಮತ್ತೆ ಪಕ್ಕದ ಆಟದ ಮೈದಾನಕ್ಕೆ ದೌಡಾಯಿಸುವುದು ನಿತ್ಯದ ಪರಿಪಾಠವಾಗಿತ್ತು. ಒಂದು ಸಣ್ಣ ವಾಕಿಂಗ್. ಹತ್ತಿರದಲ್ಲೇ ಇರುವ ಆಕಳ ಮರಿ,ಬೆಕ್ಕಿನ ಮರಿಯನ್ನು ನೋಡಿ ಅದಕ್ಕೆ ಹಾಯ್ ಹೇಳಿ ಬರುವುದು. ಬರುವಾಗ ಅಮ್ಮನಿಗೆ ತರಕಾರಿ,ಹಾಲು ತರುವುದು. ಹೇಳಲು ಮರೆತೆ ಮಾಸ್ಕ್ ಧರಿಸಿಯೇ ಎಲ್ಲಾ ಕಡೆ ಹೋಗುತ್ತಿದ್ದುದು ಪ್ರಶಂಸನೀಯ. ಮರಕೋತಿ,ಕಳ್ಳಪೋಲಿಸ್, ಕಣ್ಣುಮುಚ್ಚಾಲೆ ಆಟ ಒಂದಲ್ಲಾ ಎರಡಲ್ಲಾ ಬಾಲ್ಯದಲ್ಲಿ ನಾವು ಆಡಿದ ಆಟಗಳನ್ನೆಲ್ಲಾ ಅವರು ಆಡಲು ಪ್ರಾರಂಭಿಸಿದ್ದನ್ನು ನೋಡಿ ನನಗೆ ಹೇಳಲು ಹೆಮ್ಮೆ ಅನಿಸುತ್ತಿದೆ.ಇತಿಹಾಸವು ಮರುಕಳಿಸುತ್ತಿರಬಹುದು ಇವುಗಳಲ್ಲದೆ ರಾತ್ರಿ ಚೌಕಾಬಾರ,ಅಳುಗುಳಿ ಮಣೆ,ಕೇರಂ,ಚೆಸ್ ಇವೆಲ್ಲ ಅಪ್ಪ , ಅಮ್ಮ ಆಡುವುದನ್ನು ನೋಡುವ ,ಕಲಿಯುವ ಸುಯೋಗ ಮಗುವಿಗೆ!!!!! ಮದ್ಯದಲ್ಲಿ ಟೂ ಬಿಡುವುದು ಮತ್ತೆ ಬೇಸರವಾಗಿ ಅವರ ಜೊತೆಗೆ ಹೋಗಿ ಆಡುವುದು, ಆಟದಲ್ಲಿ ಸೋತಾಗ ಅಳುವುದು. ಗೆದ್ದಾಗ ಬೀಗುವುದು ಇದೆಲ್ಲವನ್ನೂ ನೋಡಿ ಆಯಿತು. ಸೋಲು ಗೆಲುವು ಸಮಾನವಾಗಿ ತೆಗೆದು ಕೊಳ್ಳಬೇಕೆಂದು ಪಾಠ ಹೇಳುವ ಸರದಿ ಅಮ್ಮನದಾಯಿತು. ಬೇಸರವಾದಾಗ ಸ್ವಲ್ಪ ಟಿ.ವಿ, ಮೊಬೈಲ್ ನಲ್ಲಿ ಆಟ ಆಗದಿರಲು ಸಾಧ್ಯವೆ?? ಹೊರಾಂಗಣದಲ್ಲಿ ಆಟ ಆಡುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವುದಲ್ಲದೆ ಈ ಕೊರೊನದ ಸಂದರ್ಭದಲ್ಲಿ ಮಾನಸಿಕವಾಗಿಯೂ ಲವಲವಿಕೆತನ ಅವರಿಗೆ ಸಿಗುತ್ತದಲ್ಲವೆ? ಕೈ,ಕಾಲು,ಬೆರಳುಗಳು ಮೊದಲುಗೊಂಡು ದೇಹಪೂರ್ತಿ ಕ್ರಿಯಾಶೀಲವಾಗುವುದು. ಹೀಗೆ ಮೊಮ್ಮಗಳ ದಿನಚರಿಯ ಕೇಳಿದ ನಾನು ನನ್ನ ಬಾಲ್ಯದ ದಿನಗಳಿಗೆ ಹೋಗಿ ಬಂದಿದ್ದೆ. ಈ ಕಾಂಕ್ರೀಟ್ ಕಾಡಿನಲ್ಲಿ , ಯಾಂತ್ರಿಕ ಯುಗದಲ್ಲಿ ನಾವು ಕರೆಯದೇ ಬಂದ ಕೊರೊನ ಎಷ್ಟೆಲ್ಲಾ ಪಾಠವನ್ನು ಕಲಿಸುತ್ತಿದೆ. ಚೀನಾದಲ್ಲಿ ತಯಾರಾದ ವಸ್ತುಗಳಿಗೆ ಗ್ಯಾರಂಟಿ ಇಲ್ಲ.ಹಾಗಾಯೇ ಅಲ್ಲಿಂದ ಬಂದ ವೈರಾಣುವಿನ ಜೀವಿತಾವಧಿಯು ಕ್ಷಣಿಕವಾಗಿರಲೆಂದು ಆಶಿಸುವ. *ಆಡಿಬಾ ನನ ಕಂದ ಅಂಗಾಲ ತೊಳೆದೇನ ತೆಂಗಿನಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮೊರೆ ತೊಳೆದೇನ* ಏಕೊ ಏನೊ ಜಾನಪದದ ಈ ಸಾಲನ್ನು ಗುನಗುನಿಸುವ ಮನಸ್ಸಾಗಿದೆ ಈಗ. ಮಗು ಇಷ್ಟೇಲ್ಲಾ ಆಟವಾಡುತ್ತಾ ದಿನದೂಡುವುದ ಕಂಡು ಮನಸ್ಸಿಗೆ ಸಂತೋಷ ಹಾಗು ಇನ್ನೊಂದು ಕಡೆ ಹಳೆಯ ನೆನಪಿನ ಲೋಕಕ್ಕೆ ಕರೆದೊಯ್ದು ಆ ಮಗುವಿಗೆ ನನ್ನ ಅನಂತಾನಂತ ಧನ್ಯವಾದಗಳು.

ಕಾಮೆಂಟ್‌ಗಳು